ನನ್ನ ನಿರೀಕ್ಷೆಯಂತೆ ಪತ್ರಿಕೋದ್ಯಮ ಕ್ಷೇತ್ರ ಬಿಡೋಣಾಂತ ಅನಿಸ್ತಿದೆ ಲೇಖನಕ್ಕೆ ಎರಡು 3 'ಕರೆ'ಗಳು ಬಂದಿತ್ತು. ಇನ್ನೆಷ್ಟು ಕರೆಗಳು ಬರುತ್ತೋ ಅಂತ ಗೊತ್ತಿಲ್ಲ. ಚಾತಕ ಪಕ್ಷಿಯಂತೆ ಅದೆಲ್ಲದಕ್ಕೂ ಕಾದು ಕುಳಿತಿದ್ದೇನೆ. ಆ ಮೊದಲು ಅವುಗಳೆಲ್ಲದಕ್ಕೂ ಉತ್ತರಿಸಲು ಇದೊಂದು ಸಣ್ಣ ಪ್ರಯತ್ನ. ಜೊತೆಗೆ ನಾನು ಬಿಡುತ್ತಿರುವುದಕ್ಕೆ ಇವರಿಗೇಕಪ್ಪ ತಲೆಬಿಸಿ ಅಂತಾನೂ ಅನಿಸ್ತಿದೆ! ಇರಲಿ ಇರಲಿ.
ಆ ಕೆಲವು ಪ್ರಶ್ನೆಗಳು ಹೀಗಿತ್ತು.
1) ಇರ್ಷಾದ್ ಥಿಂಕ್ ಬಿಫೋರ್ ಇಂಕ್...
2) ನೀವು ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ನೀವು ಮಿಸ್ ಗೈಡ್ ಮಾಡುತ್ತಿದ್ದೀರಿ. ಎಷ್ಟೋ ಜನ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ನೀವು ಬೇಸರಪಡಿಸುತ್ತಿದ್ದೀರಿ.
3) ನೀವು ಉಲ್ಲೇಖಿಸಿರುವ ಮಾಧ್ಯಮದಲ್ಲಿರುವವರೆಲ್ಲಾ ಹಾಗೆ ಎಂದು ಹೇಳಿದ್ದೀರಿ.
4) 'ಆ' ಮಾಧ್ಯಮದಲ್ಲಿರುವವರೆಲ್ಲಾ ಬಕೆಟ್ ಹಿಡಿಯುವವರಾ?
ಹೀಗೆ ಬಹಳಾ ಬಹಳಾ ಪ್ರಶ್ನೆಗಳು. ಅವೆಲ್ಲದಕ್ಕೂ ನನ್ನ ಉತ್ತರ ಇಲ್ಲಿದೆ. ನಾನು ಮೊನ್ನೆ ಬರೆದ ಲೇಖನವನ್ನು ಎಂದೋ ಬರಿಬೇಕು ಎಂದುಕೊಂಡಿದ್ದೆ. ಆದರೆ ಎಲ್ಲದಕ್ಕೂ ಒಂದು ಸಮಯ ಬೇಕಲ್ಲ. ಆ 'ಸಮಯ' ಈಗ ಬಂತು. 'ಥಿಂಕ್ ಬಿಫೋರ್ ಇಂಕ್' ಮಾತು ಯಾವತ್ತಿದ್ದರೂ ಫೇಮಸ್ಸೇ. ಏಕೆಂದರೆ ಲೇಖನಿ ಖಡ್ಗಕ್ಕಿಂತ ಹರಿತವಾದುದು ಎಂಬ ಪಂಚ್ ಲೈನ್ ಇಟ್ಕೊಂಡೇ 'ಇಂಚರ' ಮುದ್ರಿತ ಪ್ರಾಯೋಗಿಕ ಪತ್ರಿಕೆ ಮಾಡಿದವನು ನಾನು. ಲೇಖನಿ ಖಡ್ಗಕ್ಕಿಂತ ಹರಿತವಾದುದು ತಿಳಿಯುವುದು ಇಂಕ್ ಹಿಡ್ಕೊಂಡು ಥಿಂಕ್ ಮಾಡಿದಾಗಲೇ. ಎಲ್ಲರೂ ಇಂಕ್ ಹಿಡ್ಕೊಳ್ಳುವ ಮೊದಲೇ ಥಿಂಕ್ ಮಾಡಿದರೆ ಪರ್ತಕರ್ತನಿಗೂ ಇನ್ಯಾರೋ ಬರಹಗಾನಿಗೆ ಏನು ವ್ಯತ್ಯಾಸ ಸ್ವಾಮಿ?
ಎರಡನೇ ಪ್ರಶ್ನೆಗೆ ಬರುತ್ತೇನೆ. ನನ್ನ ಲೇಖನದಿಂದ ಯಾವ ಪತ್ರಿಕೋದ್ಯಮ ವಿದ್ಯಾರ್ಥಿಯ ಆಸೆಗೂ ಭಂಗ ತರುವ ನಿರಾಶೆ ಮಾಡುವ ಮನಸ್ಸು ನನಗಿಲ್ಲ. ನನ್ನ ಮನಸ್ಸಿನಲ್ಲಿ ಇದ್ದ ಉದ್ದೇಶ ಕೆಲವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು. ಬಹುಷಃ ಆ ಆತ್ಮಾವಲೋಕನ ಮಾಡಿಕೊಳ್ಳುವವರು ಮಾಡಿದ್ದಾರೆ. ನನಗದೇ ಸಾಕು. ನನ್ನ ಮೂಲ ಲೇಖನವನ್ನು ಪೂರ್ತಿಯಾಗಿ ಓದಿದ್ದರೆ 'ಕರೆ' ಬರೆತ್ತಲೇ ಇರಲಿಲ್ಲವೇನೋ! ಇವತ್ತಿಗೂ ಅಷ್ಟೇ ನಾನು ಹಲವು ಪತ್ರಿಕೋದ್ಯಮ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವಕಾಶ ಸಿಗುತ್ತದೆ. ಅವರ ಜೊತೆ ಮಾತನಾಡಲೂ ವೇದಿಕೆ ಕಲ್ಪಿಸಿ ಕೊಡುತ್ತಾರೆ. ನಾನು ಅಲ್ಲಿ ಮಾತು ಮುಗಿಸಿದ ಬಳಿಕ ಬೇರೆ ಕ್ಷೇತ್ರಕ್ಕೆ ಹೋಗುತ್ತೇನೆ ಎನ್ನುವ ಒಬ್ಬನಾದರೂ ವಿದ್ಯಾರ್ಥಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳುವ ಮಟ್ಟಿಗಿನ ಪ್ರತಿಕ್ರಿಯೆ ಸಿಗುತ್ತಿದೆ.
3 -4ನೇ ಪ್ರಶ್ನೆಯಂತೂ ನನಗೆ ನಗು ತರುತ್ತಿದೆ. ಕುಂಬಳ ಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿ ನೋಡಿಕೊಂಡನಂತೆ ಎಂದು ಹೇಳುವ ಪ್ರಯತ್ನ ಖಂಡಿತಾ ಬೇಡ. ಇತ್ತೀಚಿಗೆ ವಿಮ್ಸ್ ಅವ್ಯವಹಾರವನ್ನು ಭೇದಿಸಿದವರು ನನಗೆ ಆದರ್ಶ ಪತ್ರಿಕೋದ್ಯಮ ಕಲಿಸಿಕೊಟ್ಟವರು. ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಕಟ್ಟು ಬೀಳುವ ಮೊದಲು ನಾಲೆಜ್ ಇಂಪ್ರೂವ್ ಮಾಡ್ಕೋ ಎಂದು ಹೇಳಿದ ರಂಗ ಸರ್ ಇವತ್ತಿಗೂ ನನಗೆ ನೆನಪಾಗುತ್ತಾರೆ. ಜಂಪಿಂಗ್ ಜರ್ನಲಿಸ್ಟ್ ಆಗಬೇಡ ಎಂದಿದ್ದ ರವಿ ಅವರನ್ನು ಮರೆಯಲು ಸಾಧ್ಯವೇ? ಬೆಂಗಳೂರು ಟೂ ಗೋವಾ ಬುಲೆಟ್ ಓಡಿಸಿ ನನಗೆ ಬುಲೆಟ್ ಹುಚ್ಚು ಹಿಡಿಸಿದ, ತನಿಖಾ ಪತ್ರಿಕೋದ್ಯಮದ ವಿವಿಧ ಮಜಲುಗಳನ್ನು ತೆರೆದಿಟ್ಟವರನ್ನು ನಾನು ಕರೆ ಮಾಡಿದವರ ಹಾಗೆ 'ಹಾಗೆ' ಎಂದು ಹೇಳುವ ಮನುಷ್ಯ ನಾನಲ್ಲ. ಬಹುಷಃ ನಾನು ಹೇಳಿದ ನಿಮ್ಮ 'ಹಾಗೆ' ಯಾರು ಎಂಬುದು ನಿಮಗೂ ಅರ್ಥವಾದೀತು. ರಿಯಾಲಿಟೀ ಶೋ ಬಗ್ಗೆ ನಾನು ಮಾತಾಡಲ್ಲ. ಆ ವಿಚಾರದಲ್ಲಿ ನನ್ನ ನಿರೀಕ್ಷೆಯ ನಾಳೆ ಬರುವುದಿಲ್ಲ ಅಂತಾನೂ ನನಗೆ ಗೊತ್ತಿದೆ. ಅದು ಬರದೇ ಇರಲಿ. ಅಷ್ಟೇ.
ಇಷ್ಟು ಹೇಳಿ ಮುಗಿಸಬಹುದಿತ್ತು. ನಾನು ಮುಗಿಸುತ್ತಿಲ್ಲ. ಏಕೆಂದರೆ ನನ್ನ ಲೇಖನ ಹಿಂದಿನದಲ್ಲೇ ಮುಗಿದಿತ್ತು. ಮತ್ತೆ ಕೆದಕಿದವರು ನೀವೆ. ನಾನು ಮುಂದುವರೆಸುತ್ತೇನೆ. ನಾವು ಆದರ್ಶ ಪತ್ರಕರ್ತರು, ಅವರ ಹಾಗೆ ನಾನಾಗಬೇಕು ಎಂದೆಲ್ಲಾ ಹೇಳಿಕೊಂಡು ಬೆಳೆದವರು. ಆದರೆ ಅದೇ ಪರ್ತಕರ್ತರ ಹೆಸರು ಭೃಷ್ಟ ಪರ್ತಕರ್ತರ ಪಟ್ಟಿಯಲ್ಲಿ ಟಾಪ್ನಲ್ಲಿರುವಾಗ ನಮಗಾಗುವ ಅವಮಾನ ಎಂತಹುದು? ಮನೆಯ ಯಜಮಾನಾನೇ ಕಳ್ಳತನ ಮಾಡಬೇಡಿ ಎಂದು ಹೇಳಿ ನಾಳೆ ನಾಲ್ಕು ಜನರ ಮುಂದೆ ಕಳ್ಳತನ ಕೇಸ್ನಲ್ಲಿ ಸಿಕ್ಕಿಬಿದ್ದರೆ ಕುಟುಂಬ ಸದಸ್ಯ ಪಡುವ ಸಂಕಟ ನನ್ನ ಪಾಲಿನದಾಗಿತ್ತು. ಅದಕ್ಕಿಂತ ಹಿಂದೆ ನಾಲ್ಕು ಜನರ ಮುಂದೆ ಅವರನ್ನು ಹೊಗಳಿದ ನನಗೆ ಅವರು ಮುಖಕ್ಕೆ ಉಗುಳಿದಾಗ ಆದ ಅವಮಾನ ಸಹಿಸಲಸಾಧ್ಯ. ಅದಕ್ಕೆ ನನ್ನಷ್ಟಕ್ಕೆ ನಾನು ಹೇಳಿಕೊಂಡಿದ್ದು ಪತ್ರಿಕೋದ್ಯಮ ಕ್ಷೇತ್ರ ಬಿಡೋಣಾಂತ ಅನಿಸ್ತಿದೆ ಎಂದು. ಅರ್ಥವಾಯಿತು ತಾನೆ. ಪತ್ರಿಕೋದ್ಯಮ ಕ್ಷೇತ್ರ ಬಿಟ್ಟು ಹೋಗುವ ಹೇಡಿ ನಾನಲ್ಲ. ನನ್ನಲ್ಲಿ ನಿರೀಕ್ಷೆ ಇಟ್ಟಿರುವವರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತೇನೆ. ಮತ್ತೆ ಯಾರದೋ ಕರೆ ಬರುತ್ತಿದೆ! ಉತ್ತರಿಸಲು ಹೋಗುತ್ತಿದ್ದೇನೆ:)







